HomeCropಸೂರ್ಯಕಾಂತಿ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳು

ಸೂರ್ಯಕಾಂತಿ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳು

ಸೂರ್ಯಕಾಂತಿ, ಅಡುಗೆ ಎಣ್ಣೆಗೆ ಖಚ್ಚಾವಸ್ತುವಾಗಿರುವ ಒಂದು ಪ್ರಮುಖ ಬೆಳೆ. ಸೂರ್ಯಕಾಂತಿ ಬೀಜಗಳಲ್ಲಿ ಶೇಕಡಾ ನಲವತ್ತರಷ್ಟು ಉತ್ತಮ ಗುಣಮಟ್ಟದ ಎಣ್ಣೆಯ ಅಂಶವಿದೆ. ಹಾಗಾಗಿ ರೈತರಿಗೆ ಸೂರ್ಯಕಾಂತಿ ಬೆಳೆಯುವುದು ಹೆಚ್ಚು ಲಾಭದಾಯಕವಾಗಿದೆ.   

ಸೂರ್ಯಕಾಂತಿಗೆ ಸೂಕ್ತವಾದ ಮಣ್ಣು: 

ಫಲವತ್ತಾದ ಗಡುಸು ಮಣ್ಣು,  ಮರಳು ಮಿಶ್ರಿತ ಗೋಡುಮಣ್ಣಿನಿಂದ ಹಿಡಿದು ಘನವಾದ ಜೇಡಿಮಣ್ಣಿನವರೆಗೆ ಸೂರ್ಯಕಾಂತಿ ಬೆಳೆಗೆ ಸೂಕ್ತ. 

ಸೂರ್ಯಕಾಂತಿ ಬೆಳೆಗೆ ಹೆಚ್ಚಿನ ತೇವಾಂಶವಿದ್ದರೆ ಸರಿಹೊಂದುವುದಿಲ್ಲ. ನೀರು ನಿಲ್ಲುವ ಭೂಮಿಯಲ್ಲಿ ಸೂರ್ಯಕಾಂತಿ ಬೆಳೆಯುವುದು ಸೂಕ್ತವಲ್ಲ.  

ಸೂರ್ಯಕಾಂತಿಯು ಮಣ್ಣಿನ ರಸಸಾರತೆ 6.5 ರಿಂದ 8.5 ರ ವರೆಗೆ ಉತ್ತಮವಾಗಿ ಬೆಳೆಯಬಲ್ಲದು. 

ಸೂಕ್ತ ಹವಾಮಾನ 

ಸೂರ್ಯಕಾಂತಿ ಮೊಳಕೆ ಬರುವ ಮತ್ತು ಸಸಿ ಬೆಳವಣಿಗೆಯ ಹಂತದಲ್ಲಿ  ತಂಪನೆಯ ವಾತಾವರಣ ಇರಬೇಕು.  ಸಸಿ ಬೆಳೆದು ಹೂವು ಬರುವ ಹಂತದವರೆಗೆ ಉಷ್ಣ ವಾತಾವರಣ ಇರಬೇಕು. ಹೂವಿನ ಹಂತದಿಂದ ಸೂರ್ಯಕಾಂತಿ ಮಾಗಿ ಕಟಾವಿನವರೆಗೆ ಮೋಡವಿಲ್ಲದ ಶುದ್ಧ ಬಿಸಿಲಿನ ವಾತಾವರಣವಿರಬೇಕು. 

ಬೆಳವಣಿಗೆಯ ಹಂತದಲ್ಲಿ 20 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ಉಷ್ಣಾಂಶ, ಕಾಳು ಕಚ್ಚುವ ಸಮಯದಲ್ಲಿ 25 ಡಿಗ್ರಿ ಸೆಲ್ಸಿಯಸ್ ಇದ್ದಲ್ಲಿ, ಉತ್ತಮ ಗುಣಮಟ್ಟದ ಇಳುವರಿ ಪಡೆಯಬಹುದು. 38-40 ಡಿಗ್ರಿ ವರೆಗೆ ಉಷ್ಣಾಂಶವಿದ್ದಲ್ಲಿ ಬೀಜಗಳು ಬೆಳೆಯುವುದು ಕಡಿಮೆಯಾಗಿ ಕ್ರಮೇಣ ಕಡಿಮೆ ಇಳುವರಿಗೆ ಕಾರಣವಾಗಬಹುದು. 

ಭೂಮಿ ತಯಾರಿ ಹೇಗೆ ಮಾಡುವುದು? :

ಆಳವಾದ ಉಳುಮೆ ಮಾಡುವುದರ ಮೂಲಕ ಭೂಮಿ ತಯಾರಿಸಿಕೊಳ್ಳಬೇಕು. (ಮೂರರಿಂದ ನಾಲ್ಕು ಉಳುಮೆ) ಭೂಮಿಯನ್ನು ಹದಗೊಳಿಸಿ ಉತ್ತಮ ಮೊಳಕೆ ಪ್ರಮಾಣ, ಸಸ್ಯ ಬೆಳವಣಿಗೆಗೆ ಪೂರಕವಾಗಿರುವಂತೆ ಮಾಡಿಕೊಳ್ಳಬೇಕು.

ಸೂರ್ಯಕಾಂತಿ ಬೆಳೆಯಲ್ಲಿ ದಪ್ಪ ಹಾಗೂ ತೆಳುವಾದ ಬೇರುಗಳಿರುತ್ತವೆ, ಇದು ಕಡಿಮೆ ತೇವಾಂಶ ಉಳ್ಳ ಭೂಮಿಗೂ ಹೊಂದಿಕೊಳ್ಳುತ್ತದೆ. 25-30 ಸೆಂ.ಮೀ ಆಳಕ್ಕೆ ಉಳುಮೆ ಮಾಡಬೇಕು. 

ಬೀಜದ ಪ್ರಮಾಣ ಮತ್ತು ಸಾಮಾನ್ಯವಾಗಿ ಅನುಸರಿಸುವ ಅಂತರ

ತಳಿಗಳು : 4-4.5 ಕೆ.ಜಿ/ಎಕರೆಗೆ

ಹೈಬ್ರಿಡ್:  2-2.5 ಕೆ.ಜಿ/ಎಕರೆಗೆ

ಸಾಲಿನಿಂದ ಸಾಲಿಗೆ 45 ಸೆಂ.ಮೀ ಮತ್ತು ಗಿಡದಿಂದ ಗಿಡಕ್ಕೆ 30 ಸೆಂ.ಮೀ  ಅಂತರ ನೀಡಬೇಕು.

ಪ್ರತಿ ಎಕರೆಗೆ ಅಗತ್ಯವಿರುವ ರಸಾಯನಿಕಗಳು.

ಸೂರ್ಯಕಾಂತಿ  ಬೆಳೆಗೆ ಪ್ರತಿ ಎಕರೆಗೆ ಶಿಫಾರಸ್ಸು ಮಾಡಿರುವ ರಸಾಯನಿಕಗಳು 45 ಕೆ.ಜಿ ಸಾರಜನಕ, 40 ಕೆ.ಜಿ ರಂಜಕ, 30 ಕೆ.ಜಿ ಪೊಟ್ಯಾಶ್.

 ಪ್ರತಿ ಎಕರೆಗೆ 4-5 ಟನ್ ಚನ್ನಾಗಿ ಕಳಿತ ಕೊಟ್ಟಿಗೆ ಗೊಬ್ಬರ, 5 ಕೆ.ಜಿ ಜೈವಿಕ ಗೊಬ್ಬರ + ಎರಡು ಕೆ.ಜಿ ಟ್ರೈಕೋಡರ್ಮಾ, ಎರಡು ಕೆ.ಜಿ ಸುಡೋಮೊನಾಸ್ + ಒಂದು ಟನ್ ಎರೆಹುಳು ಗೊಬ್ಬರ. 

ಕೊಟ್ಟಿಗೆ ಗೊಬ್ಬರದೊಂದಿಗೆ ಜೈವಿಕ ಗೊಬ್ಬರವನ್ನು ಮಿಶ್ರಣ ಮಾಡಿ ಐದು ದಿನಗಳ ಕಾಲ ನೆರಳಿನಲ್ಲಿಟ್ಟು ಮುಖ್ಯಭೂಮಿಗೆ ಕೊಡಬೇಕು. 

ಭೂಮಿಗೆ ಕೊಟ್ಟಿಗೆ ಗೊಬ್ಬರ ಕೊಟ್ಟಮೇಲೆ ಅದನ್ನು ಚೆನ್ನಾಗಿ ಬೆರೆಯುವಂತೆ ಮಾಡಲು ಒಮ್ಮೆಉಳುಮೆ ಹಾಕಬೇಕು ಇಲ್ಲವೇ ರೋಟೋವೇಟರ್ ಹೊಡೆಯಬೇಕು. 

ಕೊಟ್ಟಿಗೆ ಗೊಬ್ಬರ ಮತ್ತು ಎರೆಹುಳುಗೊಬ್ಬರ ಕೊಡುವುದರಿಂಡ ಮಣ್ಣಿನ ರಚನೆ, ವಿನ್ಯಾಸ ವೃದ್ಧಿಯಾಗುತ್ತದೆ. ಮಣ್ಣಿನಲ್ಲಿ ಸಾವಯವ ಇಂಗಾಲ ಹೆಚ್ಚುತ್ತದೆ, ಮಣ್ಣಿನಲ್ಲಿ ರಂಧ್ರಗಳು ಹೆಚ್ಚಾಗಿ ಗಾಳಿಯಾಡಲು ಅನುಕೂಲವಾಗುತ್ತದೆ. ಮಣ್ಣಿನಲ್ಲಿ ಸೂಕ್ಷ್ಮಾಣುಜೀವಿಗಳ ಸಂಖ್ಯೆ ಹೆಚ್ಚಾಗಿ ಮಣ್ಣಿನ ರಸಸಾರತೆ ಹಾಗೂ ವಿದ್ಯುತ್ ವಾಹಕತೆ ಸಮತೋಲನದಲ್ಲಿರುತ್ತದೆ. 

ಸೂರ್ಯಕಾಂತಿಗೆ ಕ್ಯಾಲ್ಸಿಯಂ ಅಗತ್ಯ (ಕಾಳು ತುಂಬಲು ಮತ್ತು ತೂಕ ಪಡೆಯಲು), ಸಲ್ಫರ್ (ಎಣ್ಣೆಗಾಗಿ) ಬೋರಾನ್ (ಕಾಳು ಕಟ್ಟಲು) ಇವೆಲ್ಲವನ್ನೂ ಬೆಳೆಗೆ ಸಿಗುವಂತೆ ಮಾಡಲು ಮೂಲಗೊಬ್ಬರವಾಗಿ ಜಿಪ್ಸಂ 100 ಕೆ.ಜಿ/ಎಕರೆಗೆ ಮತ್ತು ಬೋರ್‍ಯಾಕ್ಸ್ 4 ಕೆ.ಜಿ/ಎಕರೆಗೆ ಪ್ರಧಾನ ಪೋಷಕಾಂಶಗಳೊಂದಿಗೆ ಕೊಡಬೇಕು. 

ಬೀಜೋಪಚಾರ:

ಉತ್ತಮ ಗುಣಮಟ್ಟದ ಆರೋಗ್ಯವಂತ ಬೆಳೆಗಾಗಿ ಬೀಜೋಪಾರ ಮಾಡುವುದು ಅತ್ಯವಶ್ಯಕ.

ಬಿತ್ತನೆಗೆ 12-24 ಗಂಟೆಗಳ ಕಾಲ ಬಿತ್ತನೆ ಬೀಜಗಳನ್ನು ನೆನೆಸಿಡುವುದರಿಂದ ಮೊಳಕೆ ಪ್ರಮಾಣ ಹೆಚ್ಚಾಗುವುದಲ್ಲದೆ ಸಸ್ಯಗಳು ಚೆನ್ನಾಗಿ  ಬರುತ್ತವೆ. 

ಬಿತ್ತನೆ ಬೀಜಗಳನ್ನು ಟ್ರೈಕೋಡರ್ಮಾ 4 ಗ್ರಾಂ/ಕೆ.ಜಿ, ಅಥವಾ ಡಾ.ಸಾಯಿಲ್ ಬೀಜೋಪಚಾರ್ ನಿಂದ ಬಿತ್ತನೆಗೆ ಮುನ್ನ ಉಪಚರಿಸಬೇಕು. ಈ ಬೀಜಗಳನ್ನು ಮತ್ತೆ ಶಿಲೀಂದ್ರನಾಶಕಗಳಿಂದ ಉಪಚರಿಸಬಾರದು. 

ಬೀಜದಿಂದ ಮತ್ತು ಮಣ್ಣಿನಿಂದ ಬರುವ ರೋಗಗಳನ್ನು ನಿಯಂತ್ರಿಸಲು ಕಾರ್ಬೆಂಡಿಜಿಮ್ ಅಥವಾ ಥೈರಾಂ 2 ಗ್ರಾಂ/ಕೆ.ಜಿ ಬೀಜಗಳನ್ನು ಉಪಚರಿಸಬೇಕು. 

ಅಜ಼ೋಸ್ಪಿರುಲಮ್ 250 ಗ್ರಾಂ/ಎಕರೆ ಬೀಜಗಳಿಗೆ ಮತ್ತು ಫಾಸ್ಫೋಬ್ಯಾಕ್ಟೀರಿಯಾ 500 ಗ್ರಾಂ/ಎಕರೆಗೆ. ಅಂಟಿಗಾಗಿ ಅಕ್ಕಿ ಗಂಜಿಯನ್ನು ಬಳಸಬಹುದು. ಇಷ್ಟಾದ ಮೇಲೆ ಹದಿನೈದು ನಿಮಿಷಗಳ ಕಾಲ ನೆರಳಿನಲ್ಲಿಟ್ಟು ಕೂಡಲೇ ಬಿತ್ತನೆಗೆ ಬಳಸಿ.  

ಬಿತ್ತನೆಯ ವಿಧಾನ : 

ಉತ್ತಮ ಮೊಳಕೆ ಪ್ರಮಾಣ ನಿರೀಕ್ಷಿಸಿಕೊಂಡು ಬಿತ್ತನೆಗೂ ಮುನ್ನ ಕನಿಷ್ಟ ಹತ್ತು ಸೆಂ.ಮೀ ಆಳಕ್ಕೆ ತೋಯುವಂತೆ ನೀರು  ಕೊಡಬೇಕು. 

ಸೂರ್ಯಕಾಂತಿಯನ್ನು ವಿವಿಧ ವಿಧಾನದಲ್ಲಿ ಬಿತ್ತನೆ ಮಾಡಬಹುದು. ಗುಳಿಮಾಡುವ ಉಪಕರಣ ಬಳಸಿ, ಡ್ರಿಲ್ ಬಳಸಿ. 

ಗಿಡದಿಂದ ಗಿಡಕ್ಕೆ 30 ಸೆಂ.ಮೀ, ಸಾಲಿನಿಂದ ಸಾಲಿಗೆ 45 ಸೆಂ.ಮೀ ಅಂತರ ಕೊಟ್ಟು 7.5 ರಿಂದ 10 ಸೆಂ.ಮೀ ಆಳದಲ್ಲಿ ಪ್ರತಿ ಗುಣಿಗೆ ಮೂರರಿಂದ ನಾಲ್ಕು ಬೀಜಗಳನ್ನು ಬಿತ್ತಬೇಕು.  

ಬಿತ್ತನೆಗೆ ಮುನ್ನ ಭೂಮಿಯನ್ನು ಉಳಬೇಕು. ಮೂಲಗೊಬ್ಬರವಾಗಿ ರಸಾಯನಿಕಗಳನ್ನು ಕೊಡಬೇಕು. 

ನೀರಿನ ನಿರ್ವಹಣೆ ಹೇಗೆ ಮಾಡಬೇಕು ?????  

ನೀರಾವರಿ ಕೊಡುವ ಪ್ರಮಾಣ, ಉಳುಮೆಯ ಕಾಲ ಮತ್ತು  ಮಣ್ಣಿನ ವಿಧದ ಮೇಲೆ ಆಧಾರವಾಗಿರುತ್ತದೆ. ಗಡುಸು ಮಣ್ಣಾದಲ್ಲಿ ಐದರಿಂದ ಆರು ನೀರಾವರಿ ಲಘು ಮಣ್ಣಾದಲ್ಲಿ ಒಂಬತ್ತರಿಂದ ಹತ್ತು ನೀರಾವರಿ ಕೊಡತಕ್ಕದ್ದು. 

ಬೆಳೆಯ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಸೂಕ್ತವಾಗಿ ನೀರಾವರಿ ಕೊಡಬೇಕು. ಬಿತ್ತನೆ ಮುನ್ನ ನೀರು ಹಾಯಿಸುವುದು ಮತ್ತು ಬಿತ್ತನೆಯ ನಂತರ ನೀರು ಕೊಡುವುದೂ ಮುಖ್ಯ. ಬಿತ್ತನೆ ಮಾಡಿದ 20 ದಿನಗಳ ನಂತರ, ಹೂವು ಕಚ್ಚುವ ಹಂತದಲ್ಲಿ ಎರಡು ನೀರಾವರಿ, ಕಾಳು ಕಟ್ಟುವ ಮತ್ತು ಕಾಳು ತುಂಬುವ ಹಂತದಲ್ಲಿ ಎರಡು ನೀರಾವರಿ ಕೊಡಬೇಕು. ಸೂರ್ಯಕಾಂತಿ ಬೆಳೆಯಲ್ಲಿ ನೀರು ಕೊಡಲು ಬಹಳ ಸೂಕ್ಷ್ಮ ಸಂದರ್ಭಗಳಿವೆ. ಅದರಲ್ಲಿ ಹೂವು ಕಚ್ಚುವಾಗ ನೀರು ಕೊಡುವುದು ಬಹಳ ಮುಖ್ಯ. 

ಸೂರ್ಯಕಾಂತಿಯಲ್ಲಿ ಕಳೆಗಳನ್ನ ಹೇಗೆ  ನಿರ್ವಹಣೆ ಮಾಡಬೇಕು?? 

ಸಮಯಕ್ಕೆ ಸರಿಯಾಗಿ ಕಳೆ ತೆಗೆಯುವುದು ಮತ್ತು ಅಂತರ ಬೆಳೆ ಮಾಡಿಕೊಳ್ಳುವುದು ಕಳೆ ನಿರ್ವಹಣೆಗೆ ಅಗತ್ಯ. 

ಬಿತ್ತನೆ ಮಾಡಿದ ಮೂರರಿಂದ  ಆರು ವಾರಗಳಲ್ಲಿ ಕೈಯಿಂದಲೇ ಕಳೆ ತೆಗೆಯಬೇಕು. ಹೊಲವನ್ನು ಕಳೆ ಮುಕ್ತವಾಗಿಡಬೇಕು. ನಂತರ ಸೂರ್ಯಕಾಂತಿ ಹುಲುಸಾಗಿ ಬೆಳೆದು ಭೂಮಿಯನ್ನು ಆವರಿಸಿಕೊಂಡು ಕಳೆ ಹುಟ್ಟುವುದನ್ನು ತಪ್ಪಿಸುತ್ತದೆ. ಭೂಮಿಯಲ್ಲಿ ತೇವಾಂಶವಿದ್ದಾಗ ಕಳೆನಾಶಕಗಳನ್ನು ಸಿಂಪಡಿಸಿ ಮತ್ತುಇಡೀ ಭೂಮಿಯನ್ನು ಸಂಪೂರ್ಣ ನೆನೆಯುವಂತೆ ಸಿಂಪಡಣೆ ಕೊಡಬೇಕು. 

ಸಸ್ಯ ಸಂರಕ್ಷಣೆ:

ಗಿಡಹೇನುಗಳು

ಸಾಮಾನ್ಯವಾಗಿ ಎಳೆಯ ಬೆಳೆಯುವ ಮತ್ತು ರಸವತ್ತಾದ ಸಸ್ಯ ಭಾಗಗಳ ಮೇಲೆ ರಸವನ್ನು ಹೀರುತ್ತವೆ. ಎಳೆಯ ಎಲೆಗಳು, ಕಾಂಡಗಳು, ಮೊಗ್ಗುಗಳು, ಹೂವುಗಳು, ಹಣ್ಣುಗಳ ಮೇಲೆ ಹೆಚ್ಚಾಗಿ  ಪರಿಣಾಮ ಬೀರುತ್ತವೆ. 

ಗಿಡಹೇನುಗಳಿಂದ ದಾಳಿಗೊಳಗಾದ ಸಸ್ಯಗಳು ತಿರುಚಿದ, ಸುರುಳಿಯಾಕಾರದ ಅಥವಾ ಊದಿಕೊಂಡ ಲಕ್ಷಣಗಳನ್ನು ತೋರಿಸುತ್ತವೆ. ಹಳದಿ ಮಚ್ಚೆಯುಳ್ಳ ಎಲೆಗಳು, ಸೋಂಕಿತ ಸಸ್ಯದ ಭಾಗಗಳ ಕಂದು ಬಣ್ಣಕ್ಕೆ ಕಾರಣವಾಗಬಹುದು.

ನಿಯಂತ್ರಣ : ಮೊನೊಕ್ರೊಟೊಫಾಸ್ @0.05-0.01% ಅಥವಾ ಡೆಮೆಟಾನ್ ಮೀಥೈಲ್ @0.05-0.02% ಗಿಡಹೇನುಗಳಿಂದ ಹೊರಬರಲು ಸಹಾಯ ಮಾಡುತ್ತದೆ.

ಬಿಳಿ ಹಿಟ್ಟಿನ ತಿಗಣೆಗಳು:

ಅವು ಬೇರುಗಳು, ಕಾಂಡಗಳು, ಹೂವುಗಳು ಮತ್ತು ಹಣ್ಣುಗಳಿಂದ ರಸವನ್ನು ಹೀರುವ ಮೂಲಕ ಸಸ್ಯಗಳನ್ನು ಹಾನಿಗೊಳಿಸುತ್ತವೆ. ತೀವ್ರವಾದ ದಾಳಿಯು ಹೂವುಗಳ ಉದುರುವಿಕೆಗೆ ಕಾರಣವಾಗುತ್ತದೆ, ಹಣ್ಣುಗಳ ರಚನೆಯು ಕಡಿಮೆಯಾಗುತ್ತದೆ ಮತ್ತು ಎಳೆಯ ಹಣ್ಣುಗಳು ಉದುರಿಹೋಗುತ್ತವೆ.

ನಿಯಂತ್ರಣ ಕ್ರಮಗಳು:

ಹೆಚ್ಚು ಸೋಂಕಿತ ಸಸ್ಯಗಳನ್ನು ತೆಗೆದುಹಾಕಿ ಮತ್ತು ನಾಶಮಾಡಿ. ಹೊಲವನ್ನು ಸಂಪೂರ್ಣವಾಗಿ ಕಳೆಗಳಿಂದ ಮುಕ್ತವಾಗಿಡಿ. ಇಲ್ಲದಿದ್ದರೆ ಅವು ಪರ್ಯಾಯ ಹೋಸ್ಟ್ ಆಗಿ ಕಾರ್ಯನಿರ್ವಹಿಸಬಹುದು ಮತ್ತು ಮುಖ್ಯ ಬೆಳೆಯನ್ನು ತಲುಪಬಹುದು.ಕ್ಷೇತ್ರದಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ. ಸಸ್ಯಗಳ ಮೇಲೆ ಹೆಚ್ಚಿನ ಒತ್ತಡದೊಂದಿಗೆ ನೀರಿನ್ನು ಸಿಂಪಡಿಸಿ, ಇದು ಹಿಟ್ಟು ತಿಗಣೆಗಳನ್ನ  ತೊಳೆಯಲು ಕಾರಣವಾಗುತ್ತದೆ.

ಹೆಚ್ಚು ಪೌಷ್ಟಿಕಾಂಶದ ಸಾರಜನಕ ಗೊಬ್ಬರದ ಅನಗತ್ಯ ಅನ್ವಯಿಕೆಗಳನ್ನು ತಪ್ಪಿಸಿ, ಇದು ಅವುಗಳನ್ನು ಹೆಚ್ಚು ರಸಭರಿತವಾಗಿಸುತ್ತದೆ ಮತ್ತು ಹಿಟ್ಟು ತಿಗಣೆಗಳ ದಾಳಿಗೆ ಹೆಚ್ಚು ಒಳಗಾಗುತ್ತದೆ.

ರೋಗ ಮತ್ತು ರೋಗ ಲಕ್ಷಣಗಳು:

ಎಲೆ ಚುಕ್ಕೆರೋಗ :

 ಹಳೆಯ ಎಲೆಗಳ ಮೇಲೆ ಹಳದಿ, ಬೂದುಬಣ್ಣದ ಮತ್ತು  ಕಂದು ಬಣ್ಣದ ಚುಕ್ಕೆಗಳು, ಅವು ದೊಡ್ಡದಾಗುತ್ತವೆ, ಹಾಗೂ  ವೃತ್ತಾಕಾರದ ಕೇಂದ್ರೀಕೃತ   ಚುಕ್ಕೆಗಳಾಗಿ ಕಪ್ಪು ಕಲೆಗಳು ಒಗ್ಗೂಡಿ ಎಲೆಗಳ ರೋಗಕ್ಕೆ ಕಾರಣವಾಗುತ್ತವೆ. 

ತೀವ್ರ ಹಂತಗಳಲ್ಲಿ ತೊಟ್ಟುಗಳು, ಕಾಂಡಗಳು ಮತ್ತು ತಲೆಯ ಮೇಲೂ ಕಲೆಗಳು ಕಾಣಿಸಿಕೊಳ್ಳುತ್ತವೆ.

ನಿಯಂತ್ರಣ ಕ್ರಮಗಳು:

  • ಹೊಲದಿಂದ ಎಲ್ಲಾ ಕಳೆಗಳನ್ನು ತೆಗೆದುಹಾಕಿ. 
  • ಉತ್ತಮ ಗಾಳಿಯ ಪ್ರಸರಣಕ್ಕೆ ಅನುಮತಿಸಿ (ಅಂದರೆ ವಿಶಾಲವಾದ ಅಂತರಗಳು, ಚಾಲ್ತಿಯಲ್ಲಿರುವ ಗಾಳಿಗೆ ಸಮಾನಾಂತರವಾಗಿರುವ ಸಾಲುಗಳು, ಮುಳ್ಳುಗಿಡಗಳಿಗೆ ಹತ್ತಿರವಲ್ಲ ). 
  • 300-400 ಲೀ ನೀರಿನಲ್ಲಿ ಝಿನೆಬ್ 75% WP @ 600-800 ಗ್ರಾಂ ಅಥವಾ 300 ಲೀ ನೀರಿನಲ್ಲಿ / ಎಕರೆಗೆ ಮ್ಯಾಂಕೋಜೆಬ್ 75% WP @ 600-800 ಗ್ರಾಂ ಸಿಂಪಡಿಸಬೇಕು. 

ಕೊಯ್ಲು 

ಸೂರ್ಯಕಾಂತಿ 100-130 ದಿನಗಳಲ್ಲಿ ತಳಿಗೆ ಅನುಗುಣವಾಗಿ ಬೆಳೆ ಬರುತ್ತದೆ. ಸೂರ್ಯಕಾಂತಿಯು ಗಟ್ಟಿಯಾದಾಗ ಮತ್ತು ಸೂರ್ಯಕಾಂತಿಯ ತಳಭಾಗ ಹಳದಿ ಬಣ್ಣಕ್ಕೆ ತಿರುಗಿದಾಗ ಕೊಯ್ಲು  ಮಾಡಬೇಕು. ಕೆಲವು ಹೂಗಳು ಒಣಗುತ್ತವೆ ಮತ್ತು ಕೆಳಗಿನ ಎಲೆಗಳು ಒಣಗಿದಂತೆಯೂ ಹಾಗೂ ಬತ್ತಿಹೋದಂತೆ ಆಗಿರುತ್ತವೆ. 

ಮಾಗಿದ ಸೂರ್ಯಕಾಂತಿಯನ್ನು ಕುಡಗೋಲು/ಕತ್ತರಿ/ಚಾಕುವಿನಿಂದ ಕತ್ತರಿಸಿ ಕೊಯ್ಲು  ಮಾಡಬೇಕು. ಕೊಯ್ಲು  ಮಾಡಿದ ನಂತರ ಬಿಸಿಲಿನಲ್ಲಿ ಸೂರ್ಯಕಾಂತಿಯನ್ನು ಮೇಲ್ಬಾಗಕ್ಕಿರಿಸಿ ಮೂರು ದಿನಗಳ ಕಾಲ ಒಣಗಿಸಬೇಕು. ಪ್ರತಿ ಮೂರುಗಂಟೆಗಳಿಗೊಮ್ಮೆ ಸೂರ್ಯಕಾಂತಿಗಳನ್ನು ತಿರುಗಿಸಿ ಹಾಕಬೇಕು. 

ಚೆನ್ನಾಗಿ ಒಣಗಿದ ತೆನೆಗಳನ್ನು ಬಡಿದು ಬೀಜಗಳನ್ನು ತೆನೆಗಳಿಂದ ಬೇರ್ಪಡಿಸಬೇಕು. ತಗಡಿನ ಹಾಳೆಗೆ ಉಜ್ಜುವುದರ ಮೂಲಕ ಅಥವಾ ಕೋಲಿನಿಂದ ಬಡಿಯುವುದರ ಮೂಲಕ ಬೀಜಗಳನ್ನು ಬೇರ್ಪಡಿಸಿ , ಬೀಜಗಳನ್ನು ಸಂಗ್ರಹಿಸಬೇಕು.

ತೆನೆ ಬಡಿದು, ಶುದ್ಧ ಬೀಜಗಳನ್ನು ಸಂಗ್ರಹಿಸಿದ ನಂತರ ತೇವಾಂಶದ ಪ್ರಮಾಣ ಶೇಕಡಾ ಎಂಟರಿಂದ ಹತ್ತುರಷ್ಟಾಗುವಂತೆ ಒಣಗಿಸಿ ಗೋಣಿ ಚೀಲಗಳಲ್ಲಿ ತುಂಬಿಡಬೇಕು. 

ಒಣಗಿಸಲು ಸುಲಭವಾಗುವಂತೆ ಎಲ್ಲಾ ಎಲೆಗಳು ಒಣಗಿದ ಮೇಲೆ ಬೆಳೆ ಕೊಯ್ಲು  ಮಾಡಬಹುದು.  ಒಂದೊಮ್ಮೆ ಕೊಯ್ಲು  ಮಾಡುವುದು ತಡವಾದಲ್ಲಿ ತೆನೆ ಬಿದ್ದು ಹೋಗುವ, ಸಿಡಿದು ಹೋಗುವ ಹಾಗೂ ಗೆದ್ದಲು ಮತ್ತು ಕೆಂಪು ಇರುವೆಗಳ ದಾಳಿಯಿಂದ ಬೆಳೆ ನಷ್ಟವಾಗಬಹುದು.  

 

spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು